ಆಗ್ರ
ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿರುವ ತಾಜ್‍ಮಹಲ್ ಇರುವ ನಗರ. ಯಮುನಾ ನದಿಯ ದಡದಲ್ಲಿ ದೆಹಲಿಗೆ 123 ಮೈಲಿ ದೂರದಲ್ಲಿದೆ. ಜನಸಂಖ್ಯೆ 5,08,680 (1961). ಅಕ್ಬರ್ ಮಹಾಶಯ ಇದನ್ನು ಊರ್ಜಿತಗೊಳಿಸಿ (1566) ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಇಲ್ಲಿ ಒಂದು ವಿಶ್ವವಿದ್ಯಾನಿಲಯವಿದೆ. ಇದು ಒಂದು ಭಾರಿ ರೈಲು ನಿಲ್ದಾಣ, ವಾಣಿಜ್ಯಕೇಂದ್ರ. ಹತ್ತಿ ಮತ್ತು ಹಿಟ್ಟಿನ ಗಿರಣಿಗಳಿವೆ. ಕಲಾತ್ಮಕವಾದ ಉಣ್ಣೆಯ ಜಮಖಾನಗಳು ಇಲ್ಲಿಂದ ದೇಶ ವಿದೇಶಗಳಿಗೆ ಹೋಗುತ್ತವೆ. ಚರ್ಮದ ಸಾಮಾನುಗಳಿಗೂ ಇದು ಪ್ರಸಿದ್ಧ. ಅಮೃತಶಿಲೆಯ ಕೆತ್ತನೆ ಕೆಲಸ, ಬೆಳ್ಳಿಯ ಎಳೆಗಳ ನೇಯ್ಗೆಗಳಿಗೆ ಇದು ಹೆಸರುವಾಸಿ.

ಆಗ್ರ ಜಿಲ್ಲೆ 1,861 ಚ.ಮೈ ವಿಸ್ತಾರವಾಗಿದೆ. ಜನಸಂಖ್ಯೆ ಸು. 19 ಲಕ್ಷ. ಸಮುದ್ರ ಮಟ್ಟದ ಮೈದಾನವಾಗಿದೆ. ಯಮುನಾ ನದಿ ಮತ್ತು ಆಗ್ರ ಕಾಲುವೆಗಳು ಇಲ್ಲಿನ ಅಭಿವೃದ್ಧಿಗೆ ಕಾರಣವಾಗಿವೆ. ಗೋದಿ, ಜವೆಗೋದಿ, ದ್ವಿದಳ ಧಾನ್ಯಗಳು ಹೇರಳವಾಗಿ ಸಾಗುವಳಿಯಾಗುತ್ತದೆ.  
		 							
ಜನರ ಭಾಷೆ ಹಿಂದಿ.     							
(ಸಿ.ಕೆ.ಎನ್.)

ಆಗ್ರ ನಗರ ಐತಿಹಾಸಿಕವಾಗಿ ಪ್ರಸಿದ್ಧವಾದ ಸ್ಥಳ. ಇಟಾವ, ತೊಯಿಲ್, ಗ್ವಾಲೇರ್, ಢೋಲಪುರ ಮೊದಲಾದ ಊರುಗಳ ನಾಯಕರನ್ನು ತನ್ನ ಹತೋಟಿಗೆ ತರಲು ಸಿಕಂದರ್‍ಲೋದಿ 1504ರಲ್ಲಿ ಈ ನಗರವನ್ನು ಕಟ್ಟಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ. ಅದಕ್ಕೆ ಒಂದು ಕೋಟೆಯನ್ನೂ ಕಟ್ಟಿಸಿದ. ಮುಂದೆ ಮೊಗಲ ಬಾದಶಹನಾದ ಬಾಬರ್ ಇದನ್ನು ಗೆದ್ದು ಹಳೆಯ ಕೋಟೆಯಲ್ಲಿ ಜಾಮಿಯ ಮಸೀದಿಯನ್ನು ಕಟ್ಟಿಸಿದ. ತರುವಾಯ ಇದು ಅಕ್ಬರ್, ಜಹಂಗೀರ್, ಷಹಜಹಾನ್ ಮೊದಲಾದ ಮೊಗಲ ಬಾದಶಹರ ರಾಜಧಾನಿಯಾಗಿತ್ತು. ಅಕ್ಬರ್ ಈ ನಗರದ ಸಮೀಪದಲ್ಲಿ ಸಿಕ್ರಿ ಎಂಬಲ್ಲಿ ಸುಂದರ ಕಲ್ಲಿನ ಕಟ್ಟಡಗಳನ್ನು ಕಟ್ಟಿಸಿದ. ಈ ಕಟ್ಟಡಗಳ ರಚನೆ ಇತಿಹಾಸ ಪ್ರಸಿದ್ಧವಾದದ್ದು. ಅಕ್ಬರ್ ಇಲ್ಲಿಯೇ ಹಲವು ಕಾಲ ವಾಸಮಾಡಿದ. ಅವನ ಕಾಲದ ಜಹಂಗೀರ್‍ಮಹಲ್ ಹಿಂದೂ ರಾಜನ ಅರಮನೆಯಂತಿದ್ದು ಮೊಗಲ್ ಶೈಲಿಯ ಮೇಲೆ ಆದ ಹಿಂದೂಪ್ರಭಾವಕ್ಕೆ ಸಾಕ್ಷಿಯಾಗಿದೆ.

ಕಲಾಪ್ರೇಮಿಯಾದ ಷಹಜಹಾನ್ ಅಕ್ಬರನ ಕಾಲದ ಕೋಟೆಯನ್ನು ದುರಸ್ತು ಮಾಡಿದ್ದಲ್ಲದೆ ಇಲ್ಲಿ ಸುಂದರ ಕಟ್ಟಡಗಳನ್ನು ಕಟ್ಟಿಸಿದ. ಈತ ಕಟ್ಟಿಸಿದ ಮೋತಿಮಸೀದಿ ಒಂದು ಉತ್ಕøಷ್ಟ ಕಲಾಕೃತಿ. ತನ್ನ ಹೆಂಡತಿ ಮಮತಾಜ ಮಹಲಳ ಸ್ಮರಣೆಗಾಗಿ ನಿರ್ಮಿಸಿದ ತಾಜ್‍ಮಹಲ್ (ನೋಡಿ- ತಾಜ್‍ಮಹಲ್) ಎಂಬ ಶಿಲಾಕೃತಿ ಜಗತ್ತಿನಲ್ಲೇ ಶ್ರೇಷ್ಠ, ಅದ್ಭುತ ಕಲಾಕೃತಿಯಾಗಿದೆ. ಇದಲ್ಲದೆ ತನ್ನ ಹೆಂಡತಿಗಾಗಿ ಕಟ್ಟಿಸಿದ ಶಹಾಬುರ್ಜಿ ಗೋಪುರ, ಜುಮ್ಮಮಸೀದಿ, ದಿವಾನ-ಈ-ಅಮ್, ದಿವಾನ-ಈ-ಖಾಸ್ ಮೊದಲಾದುವು ಈಗಲೂ ಅಚ್ಚಳಿಯದೆ ಕಂಗೊಳಿಸುತ್ತವೆ. ಆದ್ದರಿಂದಲೇ ಇದು ಅರಮನೆಗಳ ಆಗರವಾಗಿದೆ. ಆದರೆ ಬಾಬರ್ ಮತ್ತು ಹುಮಾಯೂನರ ಕಾಲದ ಮಸೀದಿಗಳು ಈಗ ಹಾಳಾಗಿವೆ.							 
 (ಎ.ವಿ.ಎನ್.; ಎಸ್.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ